ಒಂದು ಹಳೆಯ ಕತೆ

ಒಂದು ಎತ್ತಿನಿಂದ ಒಂದು ಹೆಣ್ಣಿನಿಂದ ಅಂಬೋರು
ಹಗ್ಗ ಹಿಡಿದ ಮೇಲೆ ಏನೂ ಮಾಡುವುದಕ್ಕಾಗುವುದಿಲ್ಲ
ಏನಿದ್ದರೂ ಈಗಲೆ ಎಂದು.
ನವನಾರು ಸಂದೆಲ್ಲಾ ಜಾಲಾಡಿ, ಸುಳಿ ಸುದ್ಧ, ತಲೆಬಾಲನೋಡಿ
ದನ ಕರುವ ಎಚ್ಚರಿಕೆಯಿಂದ ಆರಿಸಿ ತರುವವರು
ಇನ್ನು ಹೆಣ್ಣು ತರುವ ಮಾತೆಂದ ಮೇಲೆ ಹೇಳಬೇಕೆ
ಇದಕ್ಕಾಗಿಯೇ ಏನೋ
ಹಿಂದೆ ಹೆಣ್ಣು ತರುವಷ್ಟರಲ್ಲಿ ಏಳುಜೊತೆ ಜೋಡು
ಸವೆಯುತ್ತಿದ್ದವಂತೆ.

ಇದನ್ನೇ ದೊಡ್ಡಸ್ತಿಕೆ ವಿಷಯ ಮಾಡಿ
ಉಪ್ಪುಕಾರ ಬೆರೆಸಿ
ಹತ್ತಾರು ಜನರಲ್ಲಿ ಆಡಿ ಬಂದ ಮೇಲೆಯೆ
ಅತ್ತೆ ಮಾವ ಅವರಿಗೆ ಸಮಾಧಾನ
ತಮ್ಮ ಸೊಸೆಯ ಮೇಲೆ ಇನ್ನಿಲ್ಲದ ಅಭಿಮಾನ

ಏನಾದರೂ…..
ಅದೆಲ್ಲಿ ಹಳಿ ತಪ್ಪುವುದೋ ತಪ್ಪಿ ಬಿಡುವುದು
ಅತ್ತೆ ಸೊಸೆಯರು ಹಾವು ಮುಂಗಲಿಯಾಗುವರು
ಆರೋಪ, ಪ್ರತ್ಯಾರೋಪ ಸಾಗುವುದು-
ಒಬ್ಬಳು ‘ಬಾಳು ಕೊಡಲಿಲ್ಲ’ ವೆಂದರೆ
ಇನ್ನೊಬ್ಬಳು ‘ಮನೆ ಮುರುಕಿ’ ಯೆನ್ನುವಳು

ಸೊಸೆ-
ಮಗಳು, ಅವಳ ಮಕ್ಕಳೆಂದರೆ ಕೈಕಾಲು ಮುರಿದು ಕೊಳ್ಳುವಳು
ಸಂದರ್ಭ, ಮನೆಯನ್ನೇ ಬಳಿದು ಕೊಡಲು ತಯ್ಯಾರಿವಳು
ಹೀಗಾದರೆ ನಾನು ನನ್ನ ಮಕ್ಕಳು ಏನು ತಿನ್ನಬೇಕು?
ಅಂತವಳು ನನ್ನನ್ಯಾಕ ತರಬೇಕಾಗಿತ್ತು.
ಎರಡು ಕೈಲಿ ಸುರಿದು ಕೊಳ್ಳುವುದಕ್ಕೆ…!
ಒಂದುಟ್ಟರೆ ಸಹಿಸುವಳೆ? ಉಂಡರೆ ಸಹಿಸುವಳೆ?
ನೆರೆ ಕೆರೆ ಅಂತ ಒಂದಕ್ಕರೆಯ ನುಡಿಯಾಡಿದರೆ ಸಹಿಸುವಳೆ?
ರಕ್ಕಸಿ, ಕೊನೆಗೆ ಕೈ ಹಿಡಿದವನ ಜೊತೆಗೂ ‘ಎಷ್ಟೋ ಅಷ್ಟು’
ಮಾಡಿದಳು

ಇವಳ ಮಕ್ಕಳಂತಲ್ಲವೆ ನಾವು
ನಮ್ಮನ್ನೇನು ಹದ್ದು ಕಚ್ಚಿ ಕೊಂಡು ಬಂದು ಬಿಟ್ಟಿದೆಯೆ?
ಯಾಕಿದೆಲ್ಲಾ ಗೊತ್ತಾಗುವುದಿಲ್ಲ ಇವರಿಗೆ
ಗಂಡ ನೋಡಿದರೆ ಅಮ್ಮನ ಪಕ್ಷಪಾತಿ
ನೋಡೆ! ನನಗೆ ನೀನೂ ಬೇಕು ಅಮ್ಮನೂಬೇಕು
ಇದರಲ್ಲಿ ಯಾರನ್ನು ಬಿಡುವುದು ಹೇಳೆ?
ಎಷ್ಟಾದರು ಅವರು ಹಿರಿಯರು ನಿನ್ನ ತಂದವರಲ್ಲವೇನೆ?
‘ಒಂದಂದರೆ ಏನಾಯಿತು ಬಿಡು ಈಗ’ ಎನ್ನುವರು;

ಮಾವನಾದರೋ ಮುದಿಗೂಬೆ
ಬಾಯಿ ಬಿಚ್ಚಿದರೆ ಗೊಡ್ಡು ವೇದಾಂತ
ಇದೆಲ್ಲಾ ನೋಡುತ್ತಿದ್ದರೆ
ನನ್ನ ಮೈ ನಾನೇ ಪರಚಿ ಕೊಳ್ಳ ಬೇಕೆನಿಸುವುದು

ಅತ್ತೆ….
ಅವಳ ಮಾತೇನು ಕತೆಯೇನು
ಅವಳ ಅಳ್ಳಾಟ ಇಷ್ಟೆ ಅಂತ ಹೇಳೋಕಾಗಲ್ಲ
ಗ್ರಾಸ್ತರ ಮನೆಯ ಸೊಸೆಯೆಂದರೆ ಎಂಗಿರಬೇಕು!
ಜನ ಒಳಗೊಳಗೆ ಇರುವರು
ಇವಳಿಗೇನು ಗೊತ್ತು

ನಾವು ಹತ್ತಾಡಿದರೆ ಆಕೆ ಒಂದಾಡುವುದೂ ಕಷ್ಟ
ದೊಡ್ಡಮನೆಯ ದೊಡ್ಡ ಗುಣದ ಹೆಣ್ಣು ಮಗಳು ಎನ್ನಿಸಿಕೊಳ್ಳಬೇಕು.
ಅದಬಿಟ್ಟು ಒಂದಾಡುವಲ್ಲಿ ಹತ್ತಾಡಿದರೆ ಪೊಳ್ಳು ಎನ್ನುವರು
ಒಬ್ಬರ ಹತ್ತಿರ, ಒಂದು ಮನೆಯ ಹತ್ತಿರ ಹೋಗಲು
ಏನು ನಿಂತಿದೆ ಇವಳಿಗೆ?

ಏನು ಕೊಡ್ತಾಳ … ತಾರ್‍ತಾಳಾ… !
ಕೆಲಸವಿದ್ದರೆ ಮಾಡಬೇಕು
ಇಲ್ಲಾ ಅಂದರೆ ಒಳಗೆ ತೆಪ್ಪಗಿರಬೇಕು
ಸೊಸೆಯಾದವಳು ಹೊಸಿಲ ದಾಟಿ ಬರಬಾರದು
ನನ್ನ ಮಕ್ಕಳು ಬಂದಾಗ ಕೈ ಬಾಯಿ ನೋಡುವಳು
ಅಲ್ಲಿ… ಹೇಗೋ ಏನೋ ಇಲ್ಲಿಯಾದರೂ ಒಂದೆರಡುದಿನವಾದರು

ಸುಖವಾಗಿರಲು ಬಿಡುವುದಿಲ್ಲ ತಾಟಗಿತ್ತಿ!
ಅದೆ ತನ್ನ ಕಡೆಯವರ್‍ಯಾರಾದರು ಬಂದರೆ
ಸೀರೆ ಉದುರುವುದೇನೋ ಅನ್ನೋ ಹಾಗೆ ಓಡಾಡುವಳು

ಮಾಯಾಂಗನೆ, ಏನಿಂಡಿಹಳೋ ಅವನ ಕಿವಿಯಲ್ಲಿ
ಈ ನಡುವೆ ಅವನು ಹೆತ್ತು ಹೊತ್ತವರೆಂಬ ಗುರುತೆ ಮರೆತು
ಮಾತು ಮಾತಿಗೆ ರೇಗಾಡುವನು.

ನನ್ನ ಹತ್ತಿರ ನೀನು ಏನೂ ಹೇಳಲು ಬರಬೇಡ
ತಂದಪಳು ನೀನು
ಆಳಿಸುವಳು ಬಾಳಿಸುವಳು ನೀನು ಎನ್ನುವನು;
ಇನ್ನು ಅವರಿಗೇನಾದರೂ ಹೇಳಲು ಹೋದರೆ
ಏನು ಹೇಳುವಿ ನೀನು
ಯಾವ ದಿನ ತಿಂದದ್ದೆ ಆ ಮಗು
ಇಷ್ಟಕ್ಕೂ, ಅವಳು ಏನು ಮಾಡಿದರೂ ಚಿಕ್ಕವಳಾಗುವಳು
ಬರುವುದೆಲ್ಲಾ ನನ್ನ ತಲೆಗೇಯೆ
ನೀನೇ ಅದ್ದಿ ಕೊಳ್ಳಬೇಕು
ತಪ್ಪೋ ಒಪ್ಪೋ ಎಂಗೋ ಒಂದು ಸುಧಾರಿಸಿಕೊಂಡು ಹೋಗಬೇಕು
ಆದ ತಪ್ಪ ಇನ್ನೇನಾದರೂ ಮಾಡುವುದಿದೆಯೆ
ನೀನೆ ಹೇಳು! ನೀನೆ ಹೇಳು!!

ನಾನು ತಂದವಳು
ನನಗೆ ಎದುರಾಡುವಳು
ಹೀಗೆ ಬಿಟ್ಟರೆ ನನ್ನ ಬುಡಕ್ಕೆ ನೀರು ತರುವಳು
ನನ್ನ ಕರ್ಮ ಈ ಮನೆಗೆ ಸಿಕ್ಕಿದೆ
ತಿಕ ತಡವರಿಸಿ ಕೊಳ್ಳಲು ಪುರುಸೊತ್ತಿಲ್ಲ.
ಇವರ ಸಿಟ್ಟು ನಿರ್ವಾಕಿಲ್ಲ
ಮೇಲೆ ಅತ್ತೆ ಮಾವಂದಿರ ಚಾಕರಿ, ಕಾಟ
ಎಷ್ಟು ತೇದರು ಅಷ್ಟರಲ್ಲೆ ಇದೆ
ಒಂದೊಳ್ಳೆ ಮಾತಿಲ್ಲ
ಮಂದಿ ನೋಡಿದರೆ ಹೊಟ್ಟಿಗೆ ಹಾಲುಯ್ದು ಕೊಂಡಂತಾಗುವುದು

ಅತ್ತೆ-
ನಮ್ಮಗೋಳು ಶಿವನಿಗೆ ಮುಟ್ಟುವುದು
ಬಟ್ಟೆ ಬರೆ ಕುಕ್ಕಿ ಕೊಡುವದು ಹೋಗಲಿ
ಲಕ್ಷಣವಾಗಿ ತುತ್ತನ್ನು ಕಾಣುವುದು ದುಸ್ತಾರವಾಗಿದೆ
ಈ ನಡುವೀ ನಡುವೆ
ಇದು ಯಾರಿಗೂ ಬಿಟ್ಟಿದ್ದಲ್ಲ.
ಖಂಡಿತವಾಗಿ ಮಾಡಿದ್ದುಣ್ಣುವಳು
ಹ್ಹೇ ಭಗವಂತಾ!
ಇನ್ನು ಯಾಕಿಟ್ಟಿರುವೆ ನಮ್ಮನ್ನು
ಸಾಕುಮಾಡೋ ನಮ್ಮಪ್ಪ ನಿನ್ನ ಪಾದಸೇರಿಸಿ ಕೊಳ್ಳಪ್ಪಾ!
ಎಂದು ಮೊರೆಯುವಳು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೀರು… ನೀರು… ನೀರು…
Next post ಕಾವಲು

ಸಣ್ಣ ಕತೆ

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

cheap jordans|wholesale air max|wholesale jordans|wholesale jewelry|wholesale jerseys